1855-1923. ಭಾರತದ ಒಬ್ಬ ರಾಜಕಾರಣಿ, ಸಮಾಜಸುಧಾರಕ, ಶಿಕ್ಷಣತಜ್ಞ, ನ್ಯಾಯವಾದಿ; ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯೂ ಇಂದೂರು ಸಂಸ್ಥಾನದಲ್ಲಿ ಸ್ವಲ್ಪ ಕಾಲ ಪ್ರಧಾನಮಂತ್ರಿಯೂ ಆಗಿದ್ದವರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1855ರ ಡಿಸೆಂಬರ್ 2ರಂದು ಜನಿಸಿದರು. 14ನೆಯ ವಯಸ್ಸಿನಲ್ಲಿ ಮುಂಬಯಿಗೆ ತೆರಳಿ ಅಲ್ಲಿ ತಮ್ಮ ಸೋದರಮಾವನ ಆಶ್ರಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದಿರು. ಎಲ್ಫಿನ್ಸ್ಟನ್ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡು ತ್ತಿದ್ದಾಗ ಅಲ್ಲಿ ಪ್ರಾಧ್ಯಾಪಕ ರಾಗಿದ್ದ ಭಂಡಾರ್ಕರ್, ಪರಮಾನಂದ್, ರಾನಡೆ, ತೆಲಂಗ್ ಮತ್ತು ಫಿರೋಜ್ ಷಾ ಮೆಹತಾರಂಥ ಮಹೋಪಾಧ್ಯಾಯರ ಪ್ರಭಾವಕ್ಕೆ ಒಳಗಾದರು. ಅವರು ಬಿ.ಎ. ಪದವಿ ಪಡೆದದ್ದು 1876ರಲ್ಲಿ. 1878ರಲ್ಲಿ ತೆಲಾಂಗರ ಸಲಹೆಯ ಮೇರೆಗೆ ಇಂದುಪ್ರಕಾಶ ಎಂಬ ದ್ವಿಭಾಷಾ ವಾರಪತ್ರಿಕೆಯ ಸಂಪಾದಕತ್ವ ವಹಿಸಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕೆಲಸಮಾಡಿ ಆ ಪತ್ರಿಕೆಯ ಖ್ಯಾತಿಗೆ ಕಾರಣರಾದರು. ಪತ್ರಿಕೋದ್ಯಮದ ಜೊತೆಗೆ ಅವರು ನ್ಯಾಯಶಾಸ್ತ್ರದ ಅಧ್ಯಯನ ಮಾಡಿ 1881ರಲ್ಲಿ ಅದರಲ್ಲೂ ಪದವಿ ಪಡೆದು ವಕೀಲವೃತ್ತಿಯನ್ನಾರಂಭಿಸಿದರಲ್ಲದೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದರು. 1885ರಲ್ಲಿ ಬ್ರಿಟನ್ನಿನ ಮಹಾ ಚುನಾವಣೆಗಳ ಸಮಯದಲ್ಲಿ ಅಲ್ಲಿಯ ನಾಗರಿಕರಲ್ಲಿ ಭಾರತದ ಬಗ್ಗೆ ತಿಳುವಳಿಕೆ ಮೂಡಿಸಲು ತೆರಳಿದ ಮೂವರು ಪ್ರತಿನಿಧಿಗಳ ನಿಯೋಗದಲ್ಲೊಬ್ಬರಾಗಿದ್ದು ಬ್ರಿಟನ್ನಿನಲ್ಲಿ ಮೂರು ತಿಂಗಳುಗಳ ಕಾಲ ಪ್ರವಾಸಮಾಡಿದರು. ಚಂದಾವರಕರರು ಬ್ರಿಟನ್ನಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ರಾನಡೆಯವರು ಸ್ಥಾಪಿಸಿದ ಭಾರತ ರಾಷ್ಟ್ರೀಯ ಸಾಮಾಜಿಕ ಸಮ್ಮೇಳನದ ಕಾರ್ಯದಲ್ಲಿ ಅವರಿಗೆ ನೆರವು ನೀಡುತ್ತಿದ್ದರಲ್ಲದೆ 1901ರಲ್ಲಿ ರಾನಡೆಯವರು ನಿಧನರಾದ ಮೇಲೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಶಕಗಳ ಕಾಲ ಸಮಾಜ ಸುಧಾರಣೆ, ಹಿಂದುಳಿದ ವರ್ಗಗಳ  ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಇವುಗಳಿಗಾಗಿ ಶ್ರಮಿಸಿದರು. ವಕೀಲ ವೃತ್ತಿಯಲ್ಲೂ ಶ್ರದ್ಧೆ, ನಿರಂತರ ಶ್ರಮ, ವಾಕ್ಪಟುತ್ವ ಇವುಗಳಿಂದಾಗಿ ಇವರು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಲ್ಲಿ ಅಗ್ರಶ್ರೇಣಿಯನ್ನು ಪಡೆದÀರಲ್ಲದೆ 1901ರಲ್ಲಿ ಆ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. 1912ರಲ್ಲಿ ಆ ಅಧಿಕಾರದಿಂದ ನಿವೃತ್ತರಾದ ಮೇಲೆ ಎರಡು ವರ್ಷಕಾಲ ಇಂದೂರು ಸಂಸ್ಥಾನದ ಪ್ರಧಾನ ಮಂತ್ರಿಯಾಗಿದ್ದು ದಕ್ಷವಾಗಿ ಆಡಳಿತ ನಿರ್ವಹಿಸಿದರು.

ಚಂದಾವರಕರರು ಮುಂಬಯಿ ನಗರದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹು ಒಳ್ಳೆಯ ಮಾರ್ಗದರ್ಶಿಯಂತಿದ್ದರು. ಬೊಂಬಾಯಿ ಪ್ರೆಸಿಡೆನ್ಸಿ ಸಮಾಜ ಸುಧಾರಣಾ ಸಂಘ, ದಲಿತೋದ್ಧಾರ ಸಂಸ್ಥೆ. ಸಮಾಜ ಸೇವಾ ಲೀಗ್, ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ, ಪ್ರಾರ್ಥನಾ ಸಮಾಜ ಮತ್ತು ವಿದ್ಯಾರ್ಥಿ ಸಹೋದರರ ಸಮೂಹ ಮೊದಲಾದ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮುಂಬಯಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯ ಸ್ಥಾಪನೆಯ ಕಾಲದಿಂದಲೂ ಅದರಲ್ಲಿ ಆಸಕ್ತಿ ಹೊಂದಿದ್ದ ಅವರು 1900ರಲ್ಲಿ ಲಾಹೋರಿನಲ್ಲಿ ಅದರ ವಾರ್ಷಿಕ ಅಧಿವೇಶನದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ಸಿನಲ್ಲಿ ಎರಡು ಬಣಗಳೇರ್ಪಟ್ಟಾಗ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಸಂಗಂಡಿಗರೊಡನೆ ಮಿತವಾದಿಗಳ ಸಮ್ಮೇಳನದ ನಾಯಕರಾಗಿದ್ದರು. ಚಂದಾವರಕರರ ಸಲಹೆಗಳನ್ನು ಗಾಂಧೀಜಿಯವರೂ ಅನೇಕ ವೇಳೆ ಪುರಸ್ಕರಿಸುತ್ತಿದ್ದರು.
ಮಾಂಟ್ಫರ್ಡ್ ಸುಧಾರಣೆಗಳು 1921ರಲ್ಲಿ ಭಾರತದಾದ್ಯಂತ ಜಾರಿಗೆ ಬಂದಾಗ ಮುಂಬಯಿ ವಿಧಾನ ಪರಿಷತ್ತಿನ ಪ್ರಥಮ ಖಾಸಗಿ ಅಧ್ಯಕ್ಷರಾಗಿ ನೇಮಿಸಲ್ಪಟ್ಟು ತಮ್ಮ ಕೊನೆಯ ದಿನಗಳವರೆಗೂ ಆ ಪೀಠವನ್ನಲಂಕರಿಸಿದ್ದರು. ರಾಷ್ಟ್ರೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಚಂದಾವರಕರರು 1923ರ ಮೇ 14ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.                                      	(ಎಂ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ